
ದಿನಾಂಕ 14-11-2022 ರಿಂದ 12-03-2023 ವರೆಗೆ ವೃಷಭ ರಾಶಿಯಲ್ಲಿ ಸಂಚರಿಸುವನು. ಸಾಮಾನ್ಯವಾಗಿ ಕುಜನು ಒಂದು ರಾಶಿಯನ್ನು ಸಂಚರಿಸಲು 45 ದಿನಗಳನ್ನು ತೆಗೆದುಕೊಳ್ಳುವನು. ಆದರೆ ವಿಶೇಷ ಎನ್ನುವಂತೆ ಈ ಸಲ ಕುಜನು ವೃಷಭ ರಾಶಿಯಲ್ಲಿ ಸಂಚರಿಸಲು 4 ತಿಂಗಳು ತೆಗೆದುಕೊಳ್ಳುವನು.
14-11-2022 ರಂದು ಕುಜನು ತನ್ನ ವಕ್ರಗತಿಯಲ್ಲಿ ವೃಷಭ ರಾಶಿಯನ್ನು ಪ್ರವೇಶಿಸುವನು. ಕುಜನು ವೃಷಭ ರಾಶಿಯಲ್ಲಿ 12-01-2023ರಂದು ವಕ್ರ ತ್ಯಾಗಮಾಡಿ ಮಾರ್ಗೀಯಾಗುವನು. 12-03-2023ರಂದು ಪುನಃ ಮಿಥುನ ರಾಶಿ ಪ್ರವೇಶಿಸುವನು. ವೃಷಭ ರಾಶಿಯಲ್ಲಿ ಸಂಚರಿಸುವ ಕುಜನು, ಸಿಂಹ, ವೃಶ್ಚಿಕ, ಧನು ರಾಶಿಯನ್ನು ವೀಕ್ಷಿಸುವನು.

ಧೈರ್ಯ, ಕೋಪ, ಆಘಾತ, ಹಠ, ಸಾಹಸ, ಉಷ್ಣರೋಗದ ಖಾಯಿಲೆ, ಔದಾರ್ಯ, ಸೇನಾಧಿಪತಿ, ಯುದ್ಧ, ಬೆಂಕಿ, ಶಾಖ, ಯುದ್ಧಸಾಮಗ್ರಿ, ಅಪಘಾತ, ದ್ರೋಹ, ನಿಂದೆ, ಅಪರಾಧ, ವಿದ್ಯುತ್, ಅಣುಬಾಂಬು, ಆಯುಧ, ಭುಜಬಲ, ಗಾಯ, ದುಡುಕುತನ, ರಕ್ತದೊತ್ತಡಕ್ಕೆ ಕಾರಕನಾದ ಕುಜನು ಮುಂದಿನ ನಾಲ್ಕು ತಿಂಗಳು ವೃಷಭ ರಾಶಿಯಲ್ಲಿ ಸಂಚಾರಮಾಡುವನು.
ವೃಷಭ ರಾಶಿಯ ಅಧಿಪತಿ ಶುಕ್ರಗ್ರಹ. ಕಾಲಪುರುಷನಿಗೆ ದ್ವಿತೀಯ ಭಾವವಾಗಿದೆ. ವೃಷಭ ರಾಶಿಯು ಬೆಟ್ಟ, ಝರಿ, ಹುಲ್ಲುಗಾವಲು, ಕೃಷಿಭೂಮಿ ಪ್ರದೇಶವಾಗಿದೆ.
ಪ್ರೀತಿ, ಪ್ರೇಮ, ಪ್ರಣಯ, ವಿವಾಹ, ವಾತ್ಸಲ್ಯ, ಸ್ಪರ್ಶ, ಸೌಂದರ್ಯ, ಲೈಂಗಿಕಾಸಕ್ತಿ, ಗರ್ಭಾಶಯ, ವಾಹನ, ಗೃಹ, ಸಕಲ ಐಶ್ವರ್ಯಕ್ಕೆ ಕಾರಕನಾದ ಶುಕ್ರನ ಮನೆಯಲ್ಲಿ ಆಘಾತ ಕಾರಕನಾದ ಕುಜನು ಸಂಚಾರ ಮಾಡುವುದು ಶುಭವಲ್ಲ.
ದೇಶದ ಮೇಲೆ ಕುಜ ಗೋಚಾರ ಫಲ :
ಕುಜನು ದೀರ್ಘಕಾಲ ವೃಷಭ ರಾಶಿಯಲ್ಲಿ ಸಂಚಾರ ಮಾಡುವುದರಿಂದ ಯುದ್ಧಭೀತಿ ಎದುರಾಗುವುದು. ಸಿಂಹ ರಾಶಿಯನ್ನು ಕುಜನು ವೀಕ್ಷಿಸುವುದರ ಪರಿಣಾಮ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುವುದು. ಸಿಂಹ ಮತ್ತು ಧನು ರಾಶಿಯು ಅಗ್ನಿತತ್ವರಾಶಿಗಳು, ವೃಶ್ಚಿಕ ರಾಶಿಯ ಅಧಿಪತಿ ಕುಜನು ಅಗ್ನಿತತ್ವಗ್ರಹ. ಈ ಕಾರಣದಿಂದಾಗಿ ಭೀಕರ ಅಗ್ನಿ ದುರಂತಗಳು ಸಂಭವಿಸುವುದು. ಅಲ್ಲಲ್ಲಿ ಭೂಮಿ ಕಂಪಿಸುವುದು. ಹಿಮಪಾತ, ಬೆಟ್ಟಗುಡ್ಡಗಳು ಕುಸಿಯುವುದು. ಭೀಕರ ಅಪಘಾತಗಳು ಸಂಭವಿಸಿ ಅನೇಕ ಜೀವ ಹಾನಿಯಾಗುವುದು. ಅತ್ಯಾಚಾರ ಪ್ರಕರಣ ಎಲ್ಲೆಮೀರಿ ಹೋಗುವುದು. ಕೃಷಿಗೆ ರೋಗ ಬಾಧಿಸುವುದು. ವಾತಾವರಣದ ಉಷ್ಣಾಂಶ ಹೆಚ್ಚಾಗುವುದು.

