ಜಾತಕ
ನಾಳೆ ಎನ್ನುವುದು ಸದಾ ರಹಸ್ಯದ ಆಗರ. ಇಂದಿದ್ದವನು ನಾಳೆ ಇಲ್ಲ. ಬಡವ ಶ್ರೀಮಂತನಾಗಬಹುದು ; ಶ್ರೀಮಂತ ದರಿದ್ರನಾಗಬಹುದು. ವ್ಯಕ್ತಿ ಹುಟ್ಟಿದಾಗ ಆಕಾಶದಲ್ಲಿ ಗ್ರಹ, ನಕ್ಷತ್ರಗಳು ಎಲ್ಲೆಲ್ಲಿ ಇದ್ದವೆಂದು ಪರಿಶೀಲಿಸಿ ಅವುಗಳ ಗುಣಾವಗುಣಗಳನ್ನು ಲೆಕ್ಕಹಾಕಿ, ಮನುಷ್ಯನ ಭೂತ, ಭವಿಷ್ಯತ್, ವರ್ತಮಾನಗಳನ್ನು ತಿಳಿಯಲು ಸಾಧ್ಯವಿದೆ.
ತಂದೆ, ತಾಯಿಂದ ಹಿಡಿದು ಜೀವನದ ಪ್ರತಿಯೊಂದು ಆಗುಹೋಗುಗಳು ಸಂಭವಿಸುವುದು ನಮ್ಮ ಪೂರ್ವಜನ್ಮದ ಕರ್ಮಕ್ಕನುಗುಣವಾಗಿ. ಜನನ ಸಮಯದಲ್ಲಿದ್ದ ಗ್ರಹಗಳ ಸ್ಥಿತಿಯಿಂದ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಜಾತಕ ಕುಂಡಲಿಯಲ್ಲಿ ಗ್ರಹರ ಸಂಪೂರ್ಣ ವಿವರಗಳಿರುವುದರಿಂದ ಜೀವನದಲ್ಲಿ ಮುಂದೆ ಸಂಭವಿಸಬಹುದಾದ ಶುಭಾಶುಭ ಫಲಗಳನ್ನು ತಿಳಿದುಕೊಳ್ಳಲು ’ಜಾತಕ’ ಅತ್ಯವಶ್ಯಕವಾಗಿರುತ್ತದೆ.
ಮುಹೂರ್ತ
ತಿಥಿ, ವಾರ, ನಕ್ಷತ್ರ, ಸಮಯಗಳ ಮೂಲಕ ಶುಭ ವೇಳೆಯನ್ನು “ ಮುಹೂರ್ತ ” ಎಂದು ಕರೆಯಲಾಗುತ್ತದೆ. ನಮ್ಮ ದೈನಂದಿನ ವ್ಯವಹಾರ, ಉದ್ಯೋಗಗಳಲ್ಲಿ ಯಾವ ಕಾರ್ಯಕ್ಕೆ ಯಾವ ಸಮಯ ಉತ್ತಮ ಹಾಗೂ ಶುಭ, ಯಾವುದು ಅಶುಭ ಹಾಗೂ ಅನಿಷ್ಟ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯ. ಮದುವೆ, ವಾಹನ ಖರೀದಿ, ಗೃಹ ಪ್ರವೇಶ, ಸೀಮಂತ ಮುಂತಾದ ಶುಭಕಾರ್ಯಗಳನ್ನು ಶುಭಮುಹೂರ್ತದಲ್ಲಿ ನೆರವೇರಿಸಿದರೆ ಜೀವನ ಪೂರ್ತಿ ಸುಖ-ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುವುದು.
ವಿವಾಹ ಹೊಂದಾಣಿಕೆ
ವಧು ವರರ ವಿವಾಹದ ನಿರೀಕ್ಷೆಯನ್ನು ಅಂತಿಮಗೊಳಿಸುವ ಮೊದಲ ಹೆಜ್ಜೆಯೇ ವಿವಾಹ ಹೊಂದಾಣಿಕೆ, ಇದು ಪ್ರಮುಖ ಹೆಜ್ಜೆಯೂ ಹೌದು. ಹಿಂದೂ ವಿವಾಹ ಕ್ರಮದಲ್ಲಿ ವಧುವರಾನ್ವೇಷಣೆಯ ನಂತರ ಗಂಡು ಹೆಣ್ಣಿನ ಜೋಡಿಯನ್ನು ನಿರ್ಧರಿಸುದು ಜಾತಕ ನೋಡುವ ಮೂಲಕ. ಇತ್ತೀಚಿನ ದಿನಗಳಲ್ಲಿ ಆಧುನೀಕತೆಯ ಕಾರಣದಿಂದಾಗಿ ಜಾತಕ ಹೊಂದಾಣಿಕೆ ಮಾಡುವುದನ್ನು ಕೆಲವರು ಮರೆತು ಬಿಟ್ಟಿದ್ದಾರೆ. ಇದರಿಂದಾಗಿಯೇ ಕೆಲವೊಂದು ವಿವಾಹ ಸಂಬಂಧಗಳು ಹೆಚ್ಚು ಕಾಲ ಮುಂದುವರಿಯುತ್ತಿಲ್ಲ. ಸದಾ ಮನಃಸ್ತಾಪ, ಕಲಹಗಳು ವೈವಾಹಿಕ ಜೀವನವನ್ನು ಕಹಿಯಾಗಿಸಬಹುದು. ಇದಕ್ಕಾಗಿಯೇ ಹಿಂದಿನಕಾಲದಿಂದಲೂ ಜಾತಕ ಹೊಂದಾಣಿಕೆ ಮಾಡುವಂತಹ ಸಂಪ್ರದಾಯವು ನಡೆದುಕೊಂಡು ಬಂದಿದೆ.
ಸಂಖ್ಯಾ ಶಾಸ್ತ್ರ
ಸಂಖ್ಯಾಶಾಸ್ತ್ರವು ಭವಿಷ್ಯ ಸೂಚಕ ವಿಜ್ಞಾನವಾಗಿದೆ. ಸಂಖ್ಯಾಶಾಸ್ತ್ರವು ನಮಗೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದಗಳಿಂದ ಕಂಡು ಬಂದಿದೆ. ಈ ಸಂಖ್ಯಾಶಾಸ್ತ್ರದಿಂದ ವ್ಯಕ್ತಿಯ ಗುಣಲಕ್ಷಣ, ಆರೋಗ್ಯ, ಯಾವ ವಿದ್ಯೆಯನ್ನು ಕಲಿಯ ಬೇಕು, ಯಾವ ಉದ್ಯೋಗದಿಂದ ಲಾಭವಾಗುವುದು, ಯಾವ ಸಂಖ್ಯೆಯಲ್ಲಿ ಹುಟ್ಟಿದವರನ್ನು ವಿವಾಹವಾದರೆ ಶುಭವಾಗುವುದು, ಅದೃಷ್ಟ ರತ್ನ, ಅದೃಷ್ಟ ಸಂಖ್ಯೆ, ಮುಂತಾದ ಹಲವು ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವುದು.