
ಕುಜ ದೋಷವನ್ನು ಜನ್ಮ ಕುಂಡಲಿಯಲ್ಲಿನ ಲಗ್ನದಿಂದ ನೋಡಬೇಕು. ಲಗ್ನದಿಂದ ಎರಡು, ನಾಲ್ಕು, ಏಳು, ಎಂಟು ಅಥವಾ ಹನ್ನೆರಡನೇ ಸ್ಥಾನಗಳ ಪೈಕಿ ಯಾವುದೇ ಮನೆಯಲ್ಲಿ ಕುಜ ಗ್ರಹ ಇದ್ದರೆ ಅದು ದೋಷವಾಗಿ ಮಾರ್ಪಾಡಾಗುತ್ತದೆ. ಈ ರೀತಿ ದೋಷ ಇರುವವರಿಗೆ ಕುಜ ದೋಷ ಇರುವವರ ಜತೆಗೇ ವಿವಾಹ ಮಾಡಬೇಕು. ಆಗ ಅವರ ಜೀವನ ಚೆನ್ನಾಗಿರುತ್ತದೆ. ಸಂತಾನದಲ್ಲಿ ಸಮಸ್ಯೆಗಳಾಗುವುದಿಲ್ಲ. ಯಾವುದೇ ಸಮಸ್ಯೆಗಳಾಗುವುದಿಲ್ಲ. ಪುರುಷರ ಜಾತಕದಲ್ಲಿ ಲಗ್ನದಿಂದ ಎರಡು, ಏಳು ಅಥವಾ ಎಂಟರಲ್ಲಿ ಇರುವ ಕುಜ ಉಗ್ರ ಸ್ವರೂಪದ ದೋಷವನ್ನು ನೀಡಿದರೆ, ಸ್ತ್ರೀಯರಿಗೆ ಏಳು, ಎಂಟು ಹಾಗೂ ಹನ್ನೆರಡು ಕುಜ ದೋಷ ಉಗ್ರವಾದ ಸ್ಥಾನ. ಆದರೆ ಇದಕ್ಕೆ ಸ್ವಾಭಾವಿಕವಾಗಿಯೇ ಪರಿಹಾರಗಳಿರುತ್ತವೆ.

ಸ್ವಾಭಾವಿಕ ಪರಿಹಾರಗಳೇನು?
ನಿಮ್ಮ ಜನ್ಮ ಜಾತಕದಲ್ಲಿ ಮೇಷ, ಸಿಂಹ, ವೃಶ್ಚಿಕ, ಮಕರ, ಕುಂಭ ರಾಶಿಗಳಲ್ಲಿ ಕುಜ ಗ್ರಹ ಇದ್ದರೆ, ಅದು ಲಗ್ನದಿಂದ 1, 4, 7, 8, 12ನೇ ಸ್ಥಾನಗಳೇ ಆಗಿದ್ದರೂ ದೋಷವು ಸ್ವಾಭಾವಿಕವಾಗಿಯೇ ನಿವಾರಣೆ ಆಗುತ್ತದೆ. ಅಂಥ ಸಂದರ್ಭದಲ್ಲಿ ಪ್ರತ್ಯೇಕವಾಗಿ ದೋಷ ಪರಿಹಾರ ಪೂಜೆಗಳನ್ನೇನೂ ಮಾಡುವ ಅಗತ್ಯವಿಲ್ಲ. ಕರ್ಕಾಟಕ, ಸಿಂಹ ಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ. ವೃಶ್ಚಿಕ, ಮಿಥುನ ಲಗ್ನದವರಿಗೆ ಹನ್ನೆರಡನೇ ಸ್ಥಾನದಲ್ಲಿ ಕುಜನಿದ್ದರೂ ದೋಷವಿಲ್ಲ.

ಪರಿಹಾರ ಮಾಡಿಕೊಳ್ಳದಿದ್ದರೆ ಏನಾಗುತ್ತದೆ?
ವಿವಾಹದಲ್ಲಿ ಸಮಸ್ಯೆಗಳಾಗುತ್ತವೆ. ವಿವಾಹ ವಿಚ್ಛೇದನ ಆಗಬಹುದು. ದಂಪತಿ ಮಧ್ಯೆ ಮನಸ್ತಾಪ ಆಗುತ್ತದೆ. ಒಂದೇ ಮನೆಯಲ್ಲಿದ್ದರೂ ವೈವಾಹಿಕ ಸುಖ ಅನುಭವಿಸಲು ಆಗುವುದಿಲ್ಲ. ಸಂತಾನ ಸಮಸ್ಯೆಗಳಾಗುತ್ತವೆ. ಇನ್ನು ಕುಜನನ್ನು ಭೂಮಿ ಪುತ್ರ ಎನ್ನುತ್ತಾರೆ. ಭೂಮಿಗೆ ಸಂಬಂಧಿಸಿದ ಯಾವುದೇ ಕೆಲಸ ಕೈ ಹಿಡಿಯುವುದಿಲ್ಲ.

ರಿಯಲ್ ಎಸ್ಟೇಟ್, ಕೃಷಿ ಪ್ರಗತಿ ಆಗುವುದಿಲ್ಲ. ಆದ್ದರಿಂದ ಕುಜ ದೋಷವುಳ್ಳವರ ಹೆಸರಲ್ಲಿ ಭೂಮಿ ನೋಂದಣಿ ಮಾಡಿಕೊಂಡರೆ ಅದು ಉಳಿಯದೆ, ಮಾರಾಟ ಆಗಿಬಿಡುತ್ತದೆ. ಕಾಯಿಲೆ ಕಾಣಿಸಿಕೊಂಡು, ಅದರ ನಿವಾರಣೆಗಾಗಿ ಹಣಕಾಸಿನ ಅಗತ್ಯ ಕಂಡುಬಂದು, ಆ ಭೂಮಿ ಮಾರಾಟ ಮಾಡಬೇಕಾದ ಸಂದರ್ಭ ಬರುತ್ತದೆ.
ಯಾವ ನಕ್ಷತ್ರದಲ್ಲಿ ಜನಿಸಿದವರಿಗೆ ಕುಜದೋಷ ಇರುವುದಿಲ್ಲ?
ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಉತ್ತರಾ, ಸ್ವಾತಿ, ಅನೂರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಾಭಾದ್ರಾ ನಕ್ಷತ್ರದವರಿಗೆ ಕುಜ ದೋಷವಿದ್ದರೂ ಶಾಂತಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕೆಲವರು ವಿವಾಹ ಜೀವನದಲ್ಲಿ ತೊಂದರೆ ಅನುಭವಿಸುತ್ತಲೇ ಇರುತ್ತಾರೆ. ಕೆಲವರು ನಲವತ್ತು-ಐವತ್ತನೇ ವರ್ಷದಲ್ಲಿ ವಿವಾಹ ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತಾರೆ. ಹಾಗಂತ ಕುಜ ದೋಷದ ಪರಿಣಾಮ ಕುಜ ದಶೆ, ಕುಜ ಭುಕ್ತಿ, ಗೋಚಾರದಲ್ಲಿ ನಿಮ್ಮ ನಕ್ಷತ್ರಕ್ಕೆ ಕುಜ ಪರಿಣಾಮ ಬೀರುವ ಸ್ಥಿತಿಯಲ್ಲಿ ಬಂದಾಗ ತೊಂದರೆ ಆಗುತ್ತದೆ.
