
ವೈಕುಂಠದೊಡೆಯರಾದ ಶ್ರೀಮನ್ನಾರಾಯಣ, ಮಹಾಲಕ್ಷ್ಮಿ ದೇವರು ತಮ್ಮ ದಿವ್ಯದೃಷ್ಟಿಯಿಂದ ಭೂಲೋಕವನ್ನು ನೋಡುತ್ತಿರಲು, ಭೂಲೋಕ ದಲ್ಲೆಡೆ ನಡೆಯುವ ಅನ್ಯಾಯ ಅನಾಚಾರಗಳನ್ನು ಕಂಡು ಲಕ್ಷ್ಮೀ ದೇವರು ಅತ್ಯಂತ ದುಃಖಿತರಾಗುತ್ತಾರೆ. ಮೇಲ್ವರ್ಗದ ಜನರು, ಕೆಳವರ್ಗದ ಜನರನ್ನು ತಮ್ಮ ಕಾಲಕಸಕ್ಕಿಂತಲೂ ಕೀಳಾಗಿ ನೋಡುತ್ತಿದ್ದ ಕಾಲವದು, ಕೊರಗ ಜನಾಂಗದವರು ಬುಟ್ಟಿ ಹೆಣೆದು ಅದನ್ನು ಮಾರಾಟ ಮಾಡಿ, ಮೇಲ್ವರ್ಗದ ಜನರು ಕೊಡುವಂತಹ ಅನ್ನವನ್ನು ಊಟ ಮಾಡಿಕೊಂಡು ಅತ್ಯಂತ ಅಸಹಾಯಕರಾಗಿ ಕಣ್ಣೀರಿನಲ್ಲಿ ಕೈತೊಳೆಯುತ್ತಾ ದಿನಕಳೆಯುತ್ತಿದ್ದರು.

ಆರಾಧಿಸಲು ದೇವರಿಲ್ಲ, ಮಾರ್ಗದರ್ಶನದ ಗುರು ಇಲ್ಲದೆ ಅಜ್ಞಾನದ ಅಂಧಕಾರದಲ್ಲಿ ಕಂಗಾಲಾಗಿ, ದುಶ್ಚಟಗಳಿಗೆ ಬಲಿಯಾಗುತ್ತಾ ಅಸಹಾಯಕರಾಗಿ ಬದುಕನ್ನು ನಡೆಸುತ್ತಿದ್ದರು. ಲಕ್ಷ್ಮೀದೇವಿಯು ಅತ್ಯಂತ ದುಃಖದಿಂದ “ಸ್ವಾಮಿ ಎಲ್ಲಾ ಜೀವಿಗಳಿಗೆ ಅನ್ನವನ್ನು ಕೊಡುವಂತಹ ತಾವು ಈ ಕೆಳವರ್ಗದ ಜನರು ಎಂಜಿಲು ಅನ್ನವನ್ನು ಊಟ ಮಾಡುತ್ತಿದ್ದಾರಲ್ಲ” ಎಂದು ಹೇಳಲು ನಾರಾಯಣ ದೇವರು “ದುಃಖಿಸಬೇಡ ಲಕ್ಷ್ಮೀ, ನೋಡು ಕೊರಗ ಜನಾಂಗದಲ್ಲಿ ಕಾರಣಿಕ ಪುರುಷನ ಜನನ ಅತೀ ಶೀಘ್ರದಲ್ಲೇ ಆಗುತ್ತದೆ. ನೋಡು ಭೂಲೋಕದ ಪರಶುರಾಮ ಕ್ಷೇತದಲ್ಲಿ ಒಮ್ಮೆ ದೃಷ್ಟಿಯನ್ನು ಹಾಯಿಸು ಅಲ್ಲಿ ಕೊರಗರ ಹಟ್ಟಿಯನ್ನು ಒಮ್ಮೆ ನೋಡು.

ಇತ್ತ ಪಣಂಬೂರು (ದ.ಕ. ಜಿಲ್ಲೆಯ ಮಂಗಳೂರು ) ಸಮೀಪ ಪಡ್ಡಸಾಲೆ ಯಲ್ಲಿ ಶಿವಭಕ್ತರಾದ “ಪರವರ ಓಡಿ” ಮತ್ತು “ಅಚ್ಚು ಮೈರೆ” ಎಂಬ ದಂಪತಿಗಳು ಅತ್ಯಂತ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಮಕ್ಕಳಿಲ್ಲದ ಚಿಂತೆಯಿಂದ ಕದ್ರಿ ಮಂಜುನಾಥ ದೇವರಿಗೆ ಸಾವಿರ ಬಿದಿರಿನಿಂದ ಬುಟ್ಟಿಯನ್ನು ಮಾಡಿ ಕೊಡುತ್ತೇವೆ ಎಂದು ಹರಕೆ ಒಪ್ಪಿಸುತ್ತಾರೆ. ಹರಕೆ ಫಲ ಎಂಬಂತೆಯೂ, ಶೀಮನ್ನಾರಾಯಣ ದೇವರ ಅನುಗ್ರಹದಿಂದ ಅಚ್ಚುಮೈರೆ ಗರ್ಭವತಿಯಾಗುತ್ತಾಳೆ. ಅವಳ ಗರ್ಭಕ್ಕೆ ಒಂಭತ್ತು ತಿಂಗಳು ತುಂಬಲು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿಗೆ “ಕೊರಗ ತನಿಯ” ಎಂದು ಹೆಸರಿಟ್ಟು ಅತ್ಯಂತ ಪ್ರೀತಿಯಿಂದ ಸಾಕುತ್ತಾರೆ.

ಕೊರಗ ತನಿಯನ ಎಳೆ ಪ್ರಾಯದಲ್ಲಿಯೇ ದಷ್ಟಪುಷ್ಟವಾಗಿ ಬೆಳೆಯು ತ್ತಾನೆ. ಬಾಲಕನಾಗಿದ್ದಾಗ ಅವನ ತಾಯಿಯು ಮರಣವನ್ನಪ್ಪುತ್ತಾಳೆ. ಅನಂತರ ಅವನ ತಂದೆಯೂ ಮರಣವನ್ನಪ್ಪುತ್ತಾರೆ. ಕೇರಿಯ ಜನರು ಅತ್ಯಂತ ಪೀತಿಯಿಂದ ಬಾಲಕನನ್ನು ಸಾಕುತ್ತಿರಲು, ಒಮ್ಮೆ ಭೀಕರವಾಗಿ ಮಾರಿರೋಗ ಕೇರಿ ತುಂಬಾ ಹಬ್ಬುತ್ತದೆ. ರೋಗದ ಭೀಕರತೆಯಿಂದ ಅವನ ವಂಶದವರಾದ ಏಳು ಕೊಪ್ಪದ ಕೊರಗರೂ ಸಾವನ್ನಪ್ಪುತ್ತಾರೆ. ಕೊರಗ ತನಿಯನು ಅನಾಥನಾಗಿ ತನ್ನ ವಂಶಸ್ಥರನ್ನೆಲ್ಲಾ ಕಳೆದುಕೊಂಡು ಒಂದು ಇರುಳು ಜಾವದಹೊತ್ತಿಗೆ ತನಿಯನು ಊರುಬಿಟ್ಟು ಹೊರಡುತ್ತಾನೆ.

ಬರಬರುತ್ತಾ ತನಿಯನು ಕಲ್ಲಾಪುವಿನ ಗಡಿಯನ್ನು ತಲುಪುತ್ತಾನೆ. ಅಷ್ಟರಲ್ಲಿ ಬೆಳಗಾಗುತ್ತದೆ. ಏನೂ ಮಾಡಲು ತೋಚದೆ ತನಿಯನು ಸ್ವಲ್ಪ ಹೊತ್ತು ಮೌನವಾಗಿ ಕುಳಿತುಕೊಳ್ಳುತ್ತಾನೆ. ಅಲ್ಲೇ ಹತ್ತಿರದಲ್ಲಿ ಇದ್ದಂತಹ ದಡ್ಡಲಕಾಯಿಯನ್ನು ಹೆಕ್ಕಿ ತಂದು ಮರಳನ್ನು ಒಟ್ಟುಗೂಡಿಸಿ, ಅದನ್ನು ಅಕ್ಕಿ ಎಂದು ಭಾವಿಸಿ, ಕಸರಕದ ಎಲೆಯನ್ನು ವೀಳ್ಯದೆಲೆ ಎಂದು ಭಾವಿಸಿ, ಅದರ ಮೇಲೆ ದಡ್ಡಲದಕಾಯಿಯನ್ನು ಅಡಿಕೆ ಎಂದು ಭಾವಿಸಿ ಭಕ್ತಿಯಿಂದ ಪೂರ್ವದ ದಿಕ್ಕಿಗೆ ಮುಖಮಾಡಿ ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸುತ್ತಾನೆ. ಆಗ ಅವನಿಗೆ ದೂರದಲ್ಲಿ ಕಳ್ಳು ಹೊತ್ತುಕೊಂಡು ತಾಯಿ ಮಗ ಬರುತ್ತಿರುವುದು ಕಾಣುತ್ತದೆ. ಆಗ ತನಿಯನು ಓಡಿಹೋಗಿ ಅಡ್ಡದಾರಿಯಲ್ಲಿ ನಿಲ್ಲುತ್ತಾನೆ. ಆಗ ಕಳ್ಳು ಹೊತ್ತುಕೊಂಡಿದ್ದ ಮೈರಕ್ಕೆಯು “ನಮಗೆ ದಾರಿ ಬಿಡು; ನೀನು ಯಾರು ಮಗಾ? ಯಾಕೆ ನಮಗೆ ಅಡ್ಡವಾಗಿ ನಿಂತಿದ್ದಿ” ಎಂದು ಕೇಳಲು ತನಿಯನು “ನಾನು ಪಣಂಬೂರು ಪಟ್ಟಸಾಲೆಯಿಂದ ಬಂದೆ. ನನ್ನ ತಾಯಿ-ತಂದೆ ತೀರಿಕೊಂಡರು. ನನ್ನ ಜಾತಿ ಜನಾಂಗದವರು ಭೀಕರವಾದ ಮಾರಿರೋಗ ಬಂದು ಅಳಿದು ಹೋದರು. ನಾನು ಗತಿಗೋತ್ರವಿಲ್ಲದೆ ತಿರುಗಾಡುತ್ತಾ ಇತ್ತ ಬಂದೆ. ನಾನು ಉಣ್ಣಲು ಅನ್ನವಿರುವ, ಮಾಡಲು ಸ್ವಲ್ಪ ಕೆಲಸವಿರುವ ರಾಜ್ಯಕ್ಕೆ ಹೋಗುತ್ತೇನೆ” ಎಂದು ಹೇಳಲು ಮೈರಕ್ಕೆಯು ಮಗ ಚೆನ್ನಯ ಕೈಯಲ್ಲಿ ಇದ್ದ ಬುತ್ತಿಯನ್ನು ತೆಗೆದು ತನಿಯನಿಗೆ ಉಣ್ಣಲು ಅನ್ನವನ್ನು ಕೊಡುತ್ತಾಳೆ. ಅಂತೆಯೇ ಚಿನ್ನಯ ತಲೆಯಲ್ಲಿ ಇದ್ದ ವಸ್ತ್ರವನ್ನು ತನಿಯನಿಗೆ ಕೊಡುತ್ತಾಳೆ. “ನೀನು ನಮ್ಮ ಜೊತೆ ಬಾ ನಿನ್ನನ್ನು ನನ್ನ ಮಗನಂತೆ ನೋಡಿಕೊಳ್ಳುತ್ತೇನೆ. ನನಗೆ ಎರಡು ಮಕ್ಕಳಿದ್ದಾರೆ. ನೀನು ಸೇರಿ ಮೂವರಾಗುವಿರಿ. ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವೆ” ಎಂದು ತನಿಯನ ತಲೆಯಲ್ಲಿ ಕಳ್ಳಿನ ಮಡಿಕೆಯನ್ನು ಇಡುತ್ತಾಳೆ. ಅಂತೆಯೇ ಎದುರಿನಿಂದ ಮೈರಕ್ಕೆ ಹಿಂದಿನಿಂದ ಅವರ ಮಗ ಚೆನ್ನಯ ಮತ್ತು ಅವನ ಹಿಂದಿನಿಂದ ತನಿಯ ಕಳ್ಳಿನ ಮಡಿಕೆಯನ್ನು ಹೊತ್ತುಕೊಂಡು ಮನೆಯ ಕಡೆಗೆ ಹೊರಡುತ್ತಾರೆ.

ಇತ್ತ ಮನೆಯಲ್ಲಿ ಮೈರಕ್ಕೆ ಮಗಳಾದ ಅತ್ತುಲ್ಲ ಬೈದ್ಯೆದಿಯು ದೂರದಿಂದ ತನ್ನ ತಾಯಿ ಮತ್ತು ಅಣ್ಣ ಹಾಗೂ ತನಿಯ ಬರುತ್ತಿರುವುದನ್ನು ನೋಡುತ್ತಾಳೆ. ಹೋಗುವಾಗ ತನ್ನ ತಾಯಿ ಮತ್ತು ಅಣ್ಣ ಇಬ್ಬರೇ ಹೋಗಿದ್ದರು. ಈಗ ಮೂರು ಜನ ಬರುತ್ತಿದ್ದಾರಲ್ಲಾ ಎಂದು ಆಶ್ಚರ್ಯ ಚಕಿತಳಾಗುತ್ತಾಳೆ. ಅವರು ಮೂವರೂ ಮನೆಗೆ ತಲುಪಿದಾಗ ಅತ್ತುಲ್ಲ ಬೈದ್ಯೆದಿಯು ತಾಯಿಯ ಬಳಿ ಇಷ್ಟು ಸುಂದರವಾದ ಬಾಲಕ ನಿಮಗೆ ಎಲ್ಲಿ ಸಿಕ್ಕಿದೆ ? ಎಂದು ಕೇಳಲು ಅವನು ನಮಗೆ ಕಲ್ಲಾಪುವಿನ ಗಡಿಯಲ್ಲಿ ಸಿಕ್ಕಿದ. ಹೊರಗಿನ ಕೆಲಸಕ್ಕೆ ಆಗಬಹುದು ಎಂದು ನಾನು ಕರೆದುಕೊಂಡು ಬಂದೆ. ದಿಕ್ಕುದೆಸೆ ಇಲ್ಲದ ಈ ಹುಡುಗನನ್ನು ಚೆನ್ನಾಗಿ ಸಾಕುತ್ತಾ ಸಲಹುತ್ತಾ ಬರಬೇಕು ಎಂದು ಮಗಳ ಬಳಿ ಹೇಳುತ್ತಾಳೆ. ಮೈರಕ್ಕೆಯು ತನಿಯನ ತಲೆಯ ಮೇಲಿದ್ದ ಮಡಿಕೆಯ ಕಳ್ಳನ್ನು ಕೆಳಗಿ ಇಳಿಸಿ, ಬೇರೆ ಮಡಿಕೆಗೆ ಹೊಯ್ದಳು. ಏಳು ರಾತ್ರಿ ಎಂಟು ಹಗಲಾದರೂ ಮಡಿಕೆಯಿಂದ ತೆಗೆದ ಕಳ್ಳು ಮಾರಿ ಮುಗಿಯಲಿಲ್ಲ. ಇದನ್ನು ಕಂಡು ತಾಯಿ ಮೈರಕ್ಕೆ ಆಶ್ಚರ್ಯ ಚಕಿತಳಾಗುತ್ತಾಳೆ. ಮಾರಿದಷ್ಟು ಮುಗಿಯದ ಈ ಕಳ್ಳನ್ನು ಹೇಗೆ ಮಾರಿ ಮುಗಿಸಲಿ ಎಂದು ಚಿಂತಿಸುತ್ತಾ; ನನ್ನ ಮಗ ತನಿಯ ತಂದ ಕಳ್ಳು ಮುಗಿದರೆ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಕಂಚಿನ ಹೊದಿಕೆಯನ್ನು ಮುಚ್ಚಿಸುತ್ತೇನೆ ಎಂದು ಹರಕೆ ಹೇಳಲು ಮಡಿಕೆಯ ಕಳ್ಳು ಮಾರಾಟವಾಗಿ ಮುಗಿಯಲು ಆರಂಭಿಸಿತು. ತಾಯಿ ಮೈರಕ್ಕೆಯು ಮಗನನ್ನು ಕರೆದು ‘ನೆಡಿಲ್’ (ಕಾಟು ಜಾತಿಯ ಮರ) ಕೋಲನ್ನು ಹಾಗೂ ತಲೆಗೆ ಕಂಗಿನ ಹಾಳೆಯಿಂದ ‘ಕೊಂಬರ್’ (ಶಿರಸ್ತ್ರಾರೂ)ನ್ನು ಮಾಡಿಕೊಡಲು ಹೇಳುತ್ತಾಳೆ. ಅಂತೆಯೇ ತನಿಯನು ಮನೆಯ ಸಮೀಪದ ಕೊಟ್ಟಿಗೆಯಲ್ಲಿ ನಿಶ್ಚಿಂತೆಯಿಂದ ವಾಸಿಸುತ್ತಾ ಒಡತಿಯ ಮನೆಯ ಹೊರಗಿನ ಕೆಲಸವನ್ನು ಮಾಡುತ್ತಾ ದಿನ ಕಳೆಯುತ್ತಾನೆ.
ನನ್ನ ಹೆತ್ತ ತಾಯಿ ಕದ್ರಿಯ ಮಂಜುನಾಥ ದೇವರಿಗೆ ಬುಟ್ಟಿಯನ್ನು ಮಾಡಿಕೊಡುತ್ತೇನೆ ಎಂದು ಹೇಳಿದ ಹರಕೆ ಬಾಕಿ ಇದೆ ಅದನ್ನು ತೀರಿಸಬೇಕು’ ಎನ್ನುತ್ತಾನೆ. ತನಿಯನ ಮಾತಿನಂತೆ ಚೆನ್ನಯನು ಕತ್ತಿಯನ್ನು ತಂದು ಕೊಡುತ್ತಾನೆ; ತನಿಯನು ಬಿಳಿಲುಗಳ ರಾಶಿಯನ್ನು ಕಡಿದು ಬಿಳಿಲು ಬಿದಿರುಗಳನ್ನು ಸೇರಿಸಿ ಸಾವಿರ ಬೆತ್ತದಿಂದ ದೊಡ್ಡದಾದ ಬುಟ್ಟಿಯನ್ನು ಮಾಡಿಯೇ ಬಿಡುತ್ತಾನೆ. ಅಂತೆಯೇ ಬುಟ್ಟಿಯನ್ನು ಹೊತ್ತುಕೊಂದು ಕದ್ರಿ ದೇವಸ್ಥಾನಕ್ಕೆ ಬಂದು ದೇವರಿಗೆ ಬುಟ್ಟಿಯನ್ನು ಒಪ್ಪಿಸಿ ತಾಯಿ ಹೇಳಿದ ಹರಕೆ ಒಪ್ಪಿಸಿ ಸಂತೋಷದಿಂದ ಮನೆಗೆ ಬಂದು ಸೇರುತ್ತಾನೆ. ದಿನನಿತ್ಯದಂತೆ ತನಿಯನು ಮನೆಯ ಹೊರಗಿನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾನೆ.
ಹೀಗೆ ದಿನ ಕಳೆಯಲು ಒಂದು ದಿನ ಮೈರಕ್ಕೆಯು ತನಿಯನನ್ನು ಕರೆದು “ಮಗನೇ ನನಗೆ ಕದ್ರಿಯ ದೇವಸ್ಥಾನಕ್ಕೆ ಏಳು ಹೊರೆಕಾಣಿಕೆಯನ್ನು ಕೊಂಡು ಹೋಗಲು ಇದೆ. ಅದಕ್ಕಾಗೆ ಏಳು ಜನರನ್ನು ಸಿದ್ಧ ಮಾಡು ಎನ್ನುತ್ತಾಳೆ”. ಆಗ ತನಿಯನು “ತಾಯೇ ಅದಕ್ಕೆ ಯಾಕೆ ಚಿಂತಿಸುವಿರಿ ? ಏಳು ಜನರು ಉಣ್ಣುವಷ್ಟು ಊಟವನ್ನು, ಏಳು ಜನರು ತಿನ್ನುವಷ್ಟು ಎಲೆ ಅಡಿಕೆಯನ್ನೂ, ಏಳು ಜನರು ಕುಡಿಯುವಷ್ಟು ಕಳ್ಳನ್ನು ನನಗೆ ಕೊಡಿರಿ” ಎಂದನು. ಮೈರಕ್ಕೆ ಅದರಂತೆ ಏಳು ಜನರು ಉಣ್ಣುವಷ್ಟು ಅನ್ನ, ಎಲೆಅಡಿಕೆ, ಏಳು ಮಡಿಕೆ ಕಳ್ಳನ್ನು ತನಿಯನಿಗೆ ಕೊಟ್ಟಳು. ಅದನ್ನೆಲ್ಲಾ ಉಂಡು ಸಂತೋಷದಿಂದ ತನಿಯನು ಚೆನ್ನಯನನ್ನು ಕರೆದು ಎಲ್ಲಾ ಹೊರೆಯನ್ನು ಒಂದೇ ಹೊರೆ ಮಾಡಿ ಕಟ್ಟಿರಿ ಎಂದು, ಅದನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಕದ್ರಿಯ ದೇವಸ್ಥಾನಕ್ಕೆ ಹೋದನು. ದೇವಸ್ಥಾನದ ಅಂಗಣಕ್ಕೆ ಬಂದಂತಹ ತನಿಯನನ್ನು ಒಳಗೆ ಪ್ರವೇಶಿಸಲು ಬಿಡುವುದಿಲ್ಲ. ಆಗ ಕೋಪಗೊಂಡ ತನಿಯನು ದೇವಸ್ಥಾನದ ಹೊರಗೆ ನಿಂತುಕೊಂಡು ಹೊರೆಯನ್ನು ಒಳಗೆ ಎಸೆಯುತ್ತಾನೆ. ತನಿಯನು ದೇವಸ್ಥಾನದ ಸುತ್ತಲೂ ದೃಷ್ಟಿ ಹಾಯಿಸಿದಾಗ ದೇವಸ್ಥಾನದ ಗೋಪುರದ ಮಾಡಿಗೆ ಮಾದಳದ ಹಣ್ಣೊಂದು ಮರದಿಂದ ಬಾಗಿಕೊಂಡಿತ್ತು. ನನ್ನ ತಾಯಿಗೆ ಮಾದಳದ ಹಣ್ಣೆಂದರೆ ಬಹಳ ಇಷ್ಟ ಎಂದು ಹಣ್ಣನ್ನು ಕೊಯ್ಯಲೆಂದು ತನಿಯನು ಗೋಪುರಕ್ಕೆ ಕಾಲಿಟ್ಟು ಮಾದಳ ಹಣ್ಣಿಗೆ ಕೈಕೊಡುವಾಗ ಅಲ್ಲಿಯೇ ಮಾಯವಾದನು; ಮಾಯ ಸ್ವರೂಪವಾದ ತನಿಯನು ಕೊರಗಜ್ಜ ದೈವದ ಸ್ವರೂಪವನ್ನು ತಾಳುತ್ತಾನೆ. ಇತ್ತ ಮನೆಯಲ್ಲಿ ಮೈರಕ್ಕೆಯು ತನಿಯನು ಕದ್ರಿ ದೇವಸ್ಥಾನಕ್ಕೆ ಹೋದವನೂ ಇನ್ನೂ ಹಿಂದಿರುಗಿ ಬಾರದಿರಲು ಅತ್ಯಂತ ದುಃಖಿತಳಾಗುತ್ತಾಳೆ. ಅದೇ ದಿನ ರಾತ್ರಿ ಸ್ವಪ್ನದಲ್ಲಿ ತನಿಯನು ಕಾಣಿಸಿಕೊಂಡು “ನಾನು ಇನ್ನು ಮನುಷ್ಯ ರೂಪದಿಂದ ಕಾಣುವುದಿಲ್ಲ. ನಿಮ್ಮ ಮನೆಯ ಹೊರಗಿನಿಂದ ನನ್ನನ್ನು ಭಕ್ತಿಯಿಂದ ಆರಾಧನೆ ಮಾಡಿಕೊಂಡು ಬನ್ನಿ ನಿಮ್ಮ ಮನೆಯನ್ನು ಕಳ್ಳಕಾಕರಿಂದ ಹಾಗೆ ನಿಮಗೆ ಸಂಪೂರ್ಣ ಅನುಗ್ರಹ ರಕ್ಷಣೆಯನ್ನು ಕೊಡುತ್ತೇನೆ” ಎಂದು ಹೇಳುತ್ತಾನೆ. ಅಂತೆಯೇ ಮರುದಿನ ಮೈರಕ್ಕೆ ಹಾಗೂ ಚೆನ್ನಯನು ಮರದ ಬುಡದಲ್ಲಿ ಏಳು ಎಲೆಯಲ್ಲಿ ಅನ್ನ, ಏಳು ಮಡಿಕೆ ಕಳ್ಳು ಇಟ್ಟು ಭಕ್ತಿಯಿಂದ ತನಿಯನನ್ನು ‘ಕೊರಗಜ್ಜ’ ದೈವ ಎಂದು ಕರೆದು ಆರಾಧನೆ ಮಾಡಿಕೊಂಡು ಬರುತ್ತಾರೆ. ಅಂತೆಯೇ ತುಳುನಾಡಿನೆಲ್ಲೆಡೆ ಕೊರಗಜ್ಜ ದೈವಾಗಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಕಳೆದು ಹೋದ ವಸ್ತುವನ್ನು ತರಿಸಿಕೊಡುವ ಅತ್ಯಂತ ಕಾರಣಿಕ ದೈವವಾಗಿ ಎಲ್ಲೆಡೆಯಲ್ಲೂ ಆರಾಧನೆ ಮಾಡಿಕೊಂಡು ಬರಲಾಗುತ್ತದೆ.








