ಶಂಕರಾಚಾರ್ಯರು ದೇವಿಯೊಂದಿಗೆ ಪಗಡೆಯಾಡಿದ ಕಥೆ

ಮೊಟ್ಟ ಮೊದಲು ಶಂಕರಾಚಾರ್ಯರು ಶ್ರೀ ಚಕ್ರ ವನ್ನು ಸ್ಥಾಪನೆ ಮಾಡಿದ್ದು ಮಧುರೈ ಮೀನಾಕ್ಷೀ ದೇವಸ್ಥಾನದಲ್ಲಿ. ಕಾಳಿ ಸ್ವರೂಪದಲ್ಲಿದ್ದ ಮಧುರೆ ಮೀನಾಕ್ಷೀ ದೇವಿಯನ್ನು ಬಾಲಕ ಸಾಕ್ಷಾತ್ ಪರಮೇಶ್ವರನ ಸ್ವರೂಪ ಶಂಕರಾಚಾರ್ಯರು ಪಗಡೆ ಆಟದ ನೆಪದಲ್ಲಿ ಮಂತ್ರಶಕ್ತಿಯಿಂದ ಗೆರೆಗಳನ್ನು ಎಳೆದು ದೇವಿಯನ್ನು ಅದರಲ್ಲಿ ಬಂಧಿಸಿದ್ದರು.

ಕಾಳಿ ಸ್ವರೂಪದಲ್ಲಿದ್ದ ಮಧುರೈ ಮೀನಾಕ್ಷೀಗೆ ತಾನು ಗೆರೆಗಳ ಮಧ್ಯೆ ಬಂಧನವಾಗಿದ್ದು ಅರಿವಿಗೆ ಬಂದಾಗ ಈತ ಸಾಧಾರಣ ಬಾಲಕನಲ್ಲ ಅಂತ ತಿಳಿದು, ತನ್ನನ್ನ ಬಂಧನದಿಂದ ಮುಕ್ತಗೊಳಿಸು ಅಂತ ಕೇಳಿಕೊಳ್ಳುತ್ತಾಳೆ. ಆಗ ಶಂಕರಾಚಾರ್ಯರು ನೀನು ಕಾಳಿ ಸ್ವರೂಪ ಬಿಟ್ಟು ಮಾತೃ ಸ್ವರೂಪಕ್ಕೆ ಬಂದರೆ ಮಾತ್ರ ಬಂಧನದಿಂದ ಮುಕ್ತಿಗಳಿಸುವೆ ಅಂತ ಸವಾಲು ಹಾಕಿದಾಗ ಆ ಮುಗ್ದ ಬಾಲಕನ ಮಂತ್ರ ಶಕ್ತಿಗೆ ತಲೆ ಬಾಗಿ ಮಾತೃ ಸ್ವರೂಪವನ್ನು ಪಡೆಯುತ್ತಾಳೆ.

ಇವತ್ತಿಗೂ ನೋಡಿ ಮಧುರೆ ಮೀನಾಕ್ಷೀ ಮಧುರವಾಗಿ ನಗುವ ಮುಖದಲ್ಲಿ ಮಾತೃಸ್ವರೂಪದಲ್ಲೇ ಇದ್ದಾಳೆ. ಈ ರೀತಿಯಾಗಿ ಎಲ್ಲಿ ಎಲ್ಲಿ ಶಕ್ತಿ ಕ್ಷೇತ್ರಗಳಿವೆಯೋ ಅಲ್ಲಲ್ಲಿ ಶಂಕರಾಚಾರ್ಯರು ಶ್ರೀ ಚಕ್ರವನ್ನು ಸ್ಥಾಪನೆ ಮಾಡಿದ್ದಾರೆ .

ಶ್ರೀ ಚಕ್ರ ಅಂದರೆ ಅದೊಂದು ಮಂಡಲ. ಮಂಡಲದ ಮಧ್ಯೆ ಶ್ರೀ. ಶ್ರೀ ಅಂದರೆ ಸಾಕ್ಷಾತ್ ಪರಮೇಶ್ವರಿಯ ವಾಸ. ಅಂದರೆ ನವ ತ್ರಿಕೋನ (ಒಂಬತ್ತು ತ್ರಿಕೋನ)ದ ಮಧ್ಯೆ ಬಿಂದು. ನವಶಕ್ತಿ ಸ್ವರೂಪಳಾದ ದೇವಿ ಅದರ ಮಧ್ಯದಲ್ಲಿ ವಾಸ ಅದಕ್ಕೆ ದೇವಿಯನ್ನು ಶ್ರೀ ಚಕ್ರಾಂತರ ವಾಸಿನಿ ಅಂತ ವರ್ಣಿಸುತ್ತಾರೆ.


